ಫೋರ್ಟ್ ಕೊಚ್ಚಿಯ ಐತಿಹಾಸಿಕ ನಗರವನ್ನು ವೀಕ್ಷಿಸಲು ಕಾಲ್ನಡಿಗೆಗಿಂತಲೂ ಉತ್ತಮವಾದ ವಿಧಾನವು ಬೇರೊಂದಿಲ್ಲ. ಆರಾಮವಾಗಿರಿ, ದೀರ್ಘ ಉಸಿರಾಟ ನಡೆಸಿರಿ ಮತ್ತು ಹತ್ತಿಯುಡುಗೆ, ಶೂಗಳಲ್ಲಿ ಹೊರಕ್ಕೆ ಬನ್ನಿರಿ ಮತ್ತು ಜೊತೆಯಲ್ಲಿ ಸ್ಟ್ರಾ ಟೊಪ್ಪಿಯನ್ನು ಕೂಡ ಧರಿಸಿರಿ. ಈ ದ್ವೀಪದ ಪ್ರತಿಯೊಂದು ಇಂಚು ಜಾಗವೂ ಇತಿಹಾಸ ಪುಟದಲ್ಲಿ ದಾಖಲಾಗಿದೆ, ಇಲ್ಲಿ ನಿಮಗೆ ಅಚ್ಚರಿಯೊಂದು ಕಾಯುತ್ತಿದೆ. ಇದು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು, ಪ್ರಾಚೀನ ಕಾಲದ ಸಂಸ್ಕೃತಿಯನ್ನು ಉಳಿಸಿಕೊಂಡಿದೆ ಮತ್ತು ಇಂದಿಗೂ ಆ ಗತ ವೈಭವವನ್ನು ಜ್ಞಾಪಿಸುತ್ತಿದೆ. ನೀವು ಇತಿಹಾಸವನ್ನು ಅರಿತರೆ ಈ ರಸ್ತೆಗಳಲ್ಲಿ ನೀವು ನಡೆದು ಹೋಗುವುದನ್ನು ತಪ್ಪಿಸಲು ಯಾವುದರಿಂದಲೂ ಸಾಧ್ಯವಿಲ್ಲ.
ಕೆ. ಜೆ. ಹರ್ಷಲ್ ರಸ್ತೆಯ ಮೂಲಕ ನೇರವಾಗಿ ನಡೆದುಕೊಂಡು ಹೋಗಿ ಮತ್ತು ಎಡಕ್ಕೆ ತಿರುಗಿ, ನೀವು ಅಲ್ಲಿ ಇಮ್ಯಾನುವೆಲ್ ಕೋಟೆಯ ಅವಶೇಷಗಳನ್ನು ಕಾಣುವಿರಿ. ಈ ಭೂ ಪ್ರದೇಶವು ಹಿಂದೆ ಪೋರ್ಚುಗೀಸರಿಗೆ ಸಂಬಂಧಿಸಿದ್ದಾಗಿತ್ತು, ಇದು ಕೊಚ್ಚಿನ್‌ನ ಮಹಾರಾಜ ಮತ್ತು ಪೋರ್ಚುಗಲ್‌ನ ಅರಸರ ಹೊಂದಾಣಿಕೆಯ ಪ್ರತೀಕವಾಗಿದೆ ಇದಕ್ಕಾಗಿ ಈ ಕೋಟೆಗೆ ಅವರು ಇಮ್ಯಾನುವೆಲ್ ಕೋಟೆ ಎಂದು ಹೆಸರಿಟ್ಟರು. ಈ ಕೋಟೆಯನ್ನು 1503ರಲ್ಲಿ ನಿರ್ಮಾಣ ಮಾಡಲಾಯಿತು ಮತ್ತು 1538ರಲ್ಲಿ ಇದನ್ನು ಭದ್ರಪಡಿಸಲಾಯಿತು. ಇನ್ನೂ ಸ್ವಲ್ಪ ಮುಂದೆ ನಡೆದರೆ, ಡಚ್ಚರ ಸಮಾಧಿಯು ನಿಮಗೆ ಎದುರಾಗುತ್ತದೆ. ಇದನ್ನು 1724ರಲ್ಲಿ ಪವಿತ್ರೀಕರಿಸಲಾಗಿದೆ ಮತ್ತು ಇದರ ಮೇಲ್ವಿಚಾರಣೆಯನ್ನು ದಕ್ಷಿಣ ಭಾರತದ ಚರ್ಚ್ ನೋಡಿಕೊಳ್ಳುತ್ತದೆ, ಇಲ್ಲಿನ ಸಮಾಧಿಯ ಕಲ್ಲುಗಳು ಪ್ರಶಾಂತವಾಗಿ ಯೂರೋಪಿಯನ್ನರು ತಮ್ಮ ದೇಶವನ್ನು ತೊರೆದು ಸಾಮ್ರಾಜ್ಯ ವಿಸ್ತರಣೆಗೆ ಬಂದಿರುವುದನ್ನು ನೆನಪಿಸುತ್ತದೆ.
ಮುಂದೆ ನೋಡಬೇಕಾದ ಐತಿಹಾಸಿಕ ಸ್ಥಳ ಯಾವುದೆಂದರೆ ಅದೇ ಠಾಕುರ್ ಹೌಸ್, ಇದು ಪ್ರಾಚೀನ ಕಾಲದ ಸುಭದ್ರವಾದ ಮಾದರಿಯಾಗಿ ನಿಂತಿದೆ, ಈ ಕಟ್ಟಡವು ಅತ್ಯದ್ಭುತವಾದ ಕಟ್ಟಡ ನಿರ್ಮಾಣವಾಗಿದೆ. ಈ ಹಿಂದೆ ಇದನ್ನು ಕುನಾಲ್ ಅಥವಾ ಬೆಟ್ಟದ ಬಂಗಲೆ ಎಂದು ಕರೆಯಲಾಗುತ್ತಿತ್ತು. ಬ್ರಿಟೀಶರ್ ಆಳ್ವಿಕೆಯ ಸಮಯದಲ್ಲಿ ಇದು ಭಾರತದ ರಾಷ್ಟ್ರೀಯ ಬ್ಯಾಂಕಿನ ಮ್ಯಾನೇಜರ್‌ಗಳ ಮನೆಯಾಗಿತ್ತು. ಈಗ ಇದು ಜನಪ್ರಿಯವಾದ ಟೀ ಮಾರಾಟ ನಿಗಮವಾದ ಠಾಕುರ್ ಅಂಡ್ ಕಂಪನಿಗೆ ಸೇರಿದೆ.
ಹಾಗೆಯೇ ಮುಂದೆ ನಡೆದಾಗ ಇನ್ನೊಂದು ವಸಾಹತುಶಾಹಿಯ ರಚನೆ – ಡೇವಿಡ್ ಹಾಲ್- ನಿಮ್ಮನ್ನು ಪ್ರತೀಕ್ಷಿಸುತ್ತಿರುತ್ತದೆ. ಇದನ್ನು 1695 ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿಯು ಕಟ್ಟಿತು. ಈ ಕಟ್ಟಡವನ್ನು ತನ್ನ ಹೊರ್ಟಸ್ ಮಲಬಾರಿಕಸ್ ಹೆಸರಿನ ಕೇರಳದ ಪ್ರಾಣಿ ಮತ್ತು ಸಸ್ಯಸಂಕುಲದ ಕುರಿತಾಗಿ ಬರೆದಿರುವ ಪುಸ್ತಕದಿಂದ ಪ್ರಖ್ಯಾತನಾದ ಖ್ಯಾತ ಡಚ್ ಸೇನಾನಿ ಹೆಂಡ್ರಿಕ್ ಅಡ್ರಿಯಾನ್ ವಾನ್ ರೀಡ್ ಡ್ರೇಕ್ಸ್ಟನ್ನನೊಂದಿಗೆ ತಳಕು ಹಾಕಲಾಗಿದೆ. ಆದಾಗ್ಯೂ ಡೇವಿಡ್ ಹಾಲಿಗೆ ಅದರ ನಂತರದ ಸ್ವಾಮ್ಯಸಾಧಕ ಡೇವಿಡ್ ಕೊಡೆರನ ಹೆಸರು ಇಡಲಾಗಿದೆ.
ಪೆರೇಡ್ ಮೈದಾನ ದಾಟಿ ನಡೆದ ನಂತರ ನಿಮಗೆ ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟೀಶರು ನಡೆಸುತ್ತಿದ್ದ ಮಿಲಿಟರಿ ತಾಲೀಮಿನ ನಾಲ್ಕು ಎಕರೆ ಮೈದಾನವನ್ನು ಪ್ರವೇಶಿಸುತ್ತೀರಿ, ನಂತರ ನೀವು ಸಂತ ಫ್ರಾನ್ಸಿಸ್‌ರವರ ಚರ್ಚ್ ತಲುಪುತ್ತೀರಿ, ಇದು ಭಾರತದ ಅತ್ಯಂತ ಪುರಾತನ ಯೂರೋಪಿನ ಚರ್ಚ್ ಆಗಿದೆ. ಇದು ಪೋರ್ಚುಗೀಸರು 1503ರಲ್ಲಿ ನಿರ್ಮಾಣ ಮಾಡಿದ ನಂತರ ಹಲವಾರು ಹಂತಗಳನ್ನು ಕಳೆದಿದೆ. ಈಗ ಈ ಚರ್ಚ್ ದಕ್ಷಿಣ ಭಾರತದ ಚರ್ಚ್‌ನ ಆಡಳಿತಕ್ಕೆ ಒಳಪಟ್ಟಿದೆ. ಇದೇ ಚರ್ಚ್‌ನಲ್ಲಿ ಮೊದಲು ವಾಸ್ಕೋ ಡ ಗಾಮನನ್ನು ಸಮಾಧಿ ಮಾಡಲಾಗಿತ್ತು ಮತ್ತು ಅವರ ಸಮಾಧಿಯ ಕಲ್ಲನ್ನು ಈಗಲೂ ನೋಡಬಹುದಾಗಿದೆ. ಆತನ ಕುಟುಂಬಸ್ಥರು 1539ರಲ್ಲಿ ಪೋರ್ಚುಗಲ್‌ಗೆ ಹಿಂತಿರುಗಿದರು.
ಅರಬ್ಬಿ ಸಮುದ್ರದ ತಂಗಾಳಿಯು ನಿಮ್ಮನ್ನು ನೇವರಿಸುತ್ತಿರುವಂತೆಯೇ ಚರ್ಚ್ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಅಹ್ಲಾದಕರವಾಗಿರುತ್ತದೆ. ಸಮುದ್ರಕ್ಕೆ ಹತ್ತಿರವಾಗಿ ನಡೆದುಕೊಂಡು ಹೋದರೆ ನಿಮಗೆ ಭಾವಪ್ರಚೋದಕ ಗ್ರಂಥಾಲಯ ಮತ್ತು ಕ್ರೀಡಾ ಪಾರಿತೋಷಕಗಳ ಸಂಗ್ರಹವನ್ನು ಹೊಂದಿರುವ ಕೊಚ್ಚಿನ್ ಸ್ಪೋರ್ಟ್ಸ್ ಕ್ಲಬ್ ಎದುರಾಗುತ್ತದೆ. ಒಂದು ಭೂಚಿತ್ರವಿನ್ಯಾಸದಲ್ಲಿ ಅಳವಡಿಸಲಾಗಿರುವ ಕ್ಲಬ್ ಇನ್ನೂ ಬ್ರಿಟಿಷರ ಪರಿಸರವನ್ನು ಉಳಿಸಿಕೊಂಡಿದೆ.
ಚರ್ಚ್ ರಸ್ತೆಗೆ ಹಿಂತಿರುಗಿ ಬಂದರೆ ನಿಮ್ಮ ಎಡಬದಿಯಲ್ಲಿ ನೀವು ಇನ್ನೊಂದು ಭವ್ಯ ಬಂಗಲೆಯಾದ ಬ್ಯಾಸಿಟನ್ ಬಂಗಲೆಗೆ ಎದುರಾಗುತ್ತೀರಿ. ಈ ಅದ್ಭುತ ಇಂಡೋ-ಯೂರೋಪಿಯನ್ ಶೈಲಿಯ ಕಟ್ಟಡವನ್ನು 1667 ರಲ್ಲಿ ನಿರ್ಮಿಸಿ ಅದನ್ನು ಹಳೆಯ ಡಚ್ ಕೋಟೆಯ ಸ್ಟ್ರಾಂಬರ್ಗ್ ಬ್ಯಾಸಿಟನ್ನಿನ ಜಾಗದ ಹೆಸರಿಡಲಾಯಿತು. ಈಗ ಇದು ಸಬ್ ಕಲೆಕ್ಟರ್ ಅವರ ಅಧಿಕೃತ ನಿವಾಸವಾಗಿದೆ.
ವಾಸ್ಕೋ-ಡಾ ಗಾಮ ಚೌಕ ಇಲ್ಲಿ ಹತ್ತಿರದಲ್ಲಿಯೇ ಇದೆ. ಅಲ್ಲಿ ಒಂದು ಚಿಕ್ಕ ವಿಹಾರ ಪಥವಿದೆ. ಇದು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಇಲ್ಲಿನ ಅಂಗಡಿಗಳಲ್ಲಿ ರುಚಿಕರ ಸಮುದ್ರದ ಆಹಾರ ಮತ್ತು ಎಳನೀರು ತುಂಬಿದ್ದು ಅವು ನಿಮ್ಮನ್ನು ಸೆಳೆಯುತ್ತವೆ. ಚೈನಾದ ಮೀನು ಹಿಡಿಯುವ ಬಲೆಗಳು ಮೇಲಕ್ಕೆ ಮತ್ತು ಕೆಳಕ್ಕೆ ಹಾರುವುದನ್ನು ನೋಡುವುದು ನಿಮ್ಮ ಕಣ್ಣುಗಳಿಗೆ ಹಬ್ಬವಾಗಿದೆ. ಈ ಬಲೆಗಳನ್ನು AD 1350 ಮತ್ತು 1450ರ ನಡುವೆ ಕುಬ್ಲೈ ಖಾನ್ ಸಾಮ್ರಾಜ್ಯದ ವರ್ತಕರು ಕಟ್ಟಿರಬಹುದು ಎನ್ನಲಾಗಿದೆ.
ವಿಶ್ರಾಂತಿಯ ನಂತರ ನೀವು ಪೀಯರ್ಸ್ ಲೆಸ್ಲೀ ಬಂಗಲೆಯತ್ತ ಸಾಗಬಹುದು, ಇದೊಂದು ಆಕರ್ಷಕ ಕಟ್ಟಡವಾಗಿದ್ದು, ಇದು ಹಿಂದೆ ಹಿಂದಿನ ಕಾಫಿ ವರ್ತಕ ಕಂಪನಿಯಾದ ಪೀಯರ್ಸ್ ಲೆಸ್ಲೀ ಅಂಡ್ ಕಂಪನಿಯ ಕಛೇರಿಯಾಗಿ ಸೇವೆ ಸಲ್ಲಿಸಿತ್ತು. ಈ ಕಟ್ಟಡವು ಪೋರ್ಚುಗೀಸ್, ಡಚ್ ಮತ್ತು ಸ್ಥಳೀಯ ವಾಸ್ತುಶಿಲ್ಪದ ಪ್ರಭಾವವನ್ನು ತೋರಿಸಿಕೊಡುತ್ತದೆ. ನೀರಿನಿಂದ ಕೂಡಿರುವ ವರಾಂಡಗಳು ಇದರ ಅಂದವನ್ನು ಇನ್ನೂ ಹೆಚ್ಚುವಂತೆ ಮಾಡಿದೆ. ಬಲಕ್ಕೆ ತಿರುಗಿದರೆ ನೀವು ಓಲ್ಡ್ ಹಾರ್ಬರ್ ಹೌಸ್‌ಗೆ ಬರುತ್ತೀರಿ, ಇದನ್ನು 1808ರಲ್ಲಿ ನಿರ್ಮಾಣ ಮಾಡಲಾಗಿತ್ತು ಮತ್ತು ಇದಕ್ಕೆ ಜನಪ್ರಿಯ ಟೀ ವರ್ತಕರಾದ ಕ್ಯಾರಿಯೇಟ್ ಮೊರಾನ್ ಅಂಡ್ ಕಂಪನಿಯವರು ಮಾಲೀಕರಾಗಿದ್ದರು. ಇದರ ಸಮೀಪದಲ್ಲಿಯೇ ಕೊಡರ್ ಹೌಸ್ ಇದೆ, ಈ ಅತ್ಯದ್ಭುತವಾದ ಕಟ್ಟಡವನ್ನು ಕೊಚ್ಚಿನ ಇಲೆಕ್ಟ್ರಿಕ್ ಕಂಪನಿಯ ಸ್ಯಾಮುವೆಲ್ ಎಸ್ ಕೊಡರ್ 1808ರಲ್ಲಿ ನಿರ್ಮಿಸಿದರು. ಇದು ಭಾರತ ಮತ್ತು ಯೂರೋಪಿನ ವಾಸ್ತುಶಿಲ್ಪ ಮೇಳೈಸಿ ನೆಲೆ ನಿಂತಿರುವ ವಿನ್ಯಾಸವನ್ನು ಪ್ರದರ್ಶಿಸುತ್ತದೆ.
ಇಲ್ಲಿಂದ ಇನ್ನೂ ಬಲಕ್ಕೆ ತಿರುಗಿ ನೀವು ಪ್ರಿನ್ಸೆಸ್ ರಸ್ತೆಯನ್ನು ತಲಪಬಹುದು. ಇಲ್ಲಿರುವ ಹಲವಾರು ಅಂಗಡಿಗಳಿಂದ ತಾಜಾ ಹೂಗಳನ್ನು ಖರೀದಿಸಿ. ಈ ಪ್ರದೇಶದ ಪ್ರಾರಂಭದಲ್ಲಿನ ರಸ್ತೆಗಳಲ್ಲೊಂದಾದ ಇದು ಎರಡೂ ಪಕ್ಕಗಳಲ್ಲಿ ಯೂರೋಪಿಯನ್ ಮಾದರಿಯ ಮನೆಗಳನ್ನು ಹೊಂದಿದೆ. ಕೊಚ್ಚಿನ್ನಿನ ವಿನೋದಾಕಾಂಕ್ಷಿ ಜನಗಳು ಪದೇಪದೇ ಭೇಟಿಕೊಡುವ ’ಲೋಫರ್ಸ್ ಕಾರ್ನರ್’ ಇಲ್ಲಿದೆ.
ಲೋಫರ್ಸ್ ಕಾರ್ನರ್‌ನಿಂದ ಉತ್ತರಕ್ಕೆ ನಡೆದುಕೊಂಡು ಹೋದರೆ ನಿಮಗೆ ಪೋರ್ಚುಗೀಸರಿಂದ ನಿರ್ಮಿಸಲ್ಪಟ್ಟು 1558 ರಲ್ಲಿನಾಲ್ಕನೆಯ ಪೋಪ್ ಪಾಲ್‌ನಿಂದ ಮುಖ್ಯ ಚರ್ಚಾಗಿ ಬಡತಿ ಹೊಂದಿದ ಸಾಂತಾ ಕ್ರುಜ್ ಬ್ಯಾಸಿಲಿಕ ಸಿಗುತ್ತದೆ. 1984 ರಲ್ಲಿಎರಡನೆಯಪೋಪ್ ಜಾನ್ ಪಾಲನಿಂದ ಅದು ಬ್ಯಾಸಿಲಿಕವೆಂದು ಘೋಷಿಸಲ್ಪಟ್ಟಿತು. ಬರ್ಘರ್ ರಸ್ತೆ ಮತ್ತು 1808 ರಲ್ಲಿ ನಿರ್ಮಾಣಗೊಂಡು ಈಗ ಒಂದು ಪ್ರೌಢಶಾಲೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಪಾರಂಪರಿಕ ಕಟ್ಟಡ ಡೆಲ್ಟ ಸ್ಟಡಿಗಳ ಕಡೆಗೆ ಒಂದು ಕ್ಷಿಪ್ರ ನೋಟವನ್ನು ಹರಿಸಿ, ಕೆಳಗೆ ಪುನಃ ಪ್ರಿನ್ಸೆಸ್ ರಸ್ತೆಯ ಕಡೆಗೆ ನಡೆದುಕೊಂಡು ಹೋಗಿ ನಂತರ ರೋಸ್ ರಸ್ತೆಗೆ ಬನ್ನಿ. ಅಲ್ಲಿ ನೀವು ವಾಸ್ಕೋಡಗಾಮನ ಮನೆಯೆಂದು ನಂಬಲಾದ ವಾಸ್ಕೋ ಮನೆಯನ್ನು ನೋಡುವಿರಿ. ಈ ಸಾಂಪ್ರದಾಯಿಕ ಮಾದರಿ ಯೂರೋಪಿಯನ್ ಮನೆಯು ಕೊಚ್ಚಿಯಲ್ಲಿರುವ ಅತ್ಯಂತ ಹಳೆಯದಾದ ವಾಸದ ಮನೆಗಳಲ್ಲಿ ಒಂದಾಗಿದೆ.
ಎಡಕ್ಕೆ ತಿರುಗಿ ರಿಡ್ಸ್‌ಡೇಲ್ ರಸ್ತೆಯ ಕಡೆಗೆ ನಡೆದುಕೊಂಡು ಹೋದರೆ ನಿಮಗೆ ಪೆರೇಡ್ ಮೈದಾನಕ್ಕೆ ಎದುರಾಗಿರುವ ಮರದ ದೊಡ್ಡ VOC ದ್ವಾರವು ಸಿಕ್ಕುತ್ತದೆ. 1740 ರಲ್ಲಿ ನಿರ್ಮಿತವಾದ ಈ ದ್ವಾರಕ್ಕೆ ಅದರ ಹೆಸರು ಡಚ್ ಈಸ್ಟ್ ಇಂಡಿಯಾ ಕಂಪನಿಯ ಸಂಯುಕ್ತಾಕ್ಷರಗಳಿಂದ (VOC) ಬಂದಿದೆ. ಇಲ್ಲಿಗೆ ಅತಿ ಸಮೀಪದಲ್ಲಿಯೇ ಕೊಚ್ಚಿಯಲ್ಲಿದ ಬ್ರಿಟಿಷರ ನಾಲ್ಕು ಕ್ಲಬ್‌ಗಳಲ್ಲಿ ಒಂದಾಗಿದ್ದ ಯೂನೈಟೆಡ್ ಕ್ಲಬ್ ಇದೆ. ಈಗ ಅದು ಹತ್ತಿರದ ಸಂತ ಫ್ರಾನ್ಸಿಸ್ ಪ್ರಾಥಮಿಕ ಶಾಲೆಯ ತರಗತಿಯ ಕೊಠಡಿಯನ್ನಾಗಿ ಉಪಯೋಗಿಸಲಾಗುತ್ತಿದೆ.
ಇಲ್ಲಿಂದ ನೇರವಾಗಿ ನಡೆದು, 1506 ರಲ್ಲಿ ನಿರ್ಮಿಸಲಾಗಿರುವ ರಸ್ತೆಯ ಕೊನೆಯಲ್ಲಿರುವ ಬಿಶಪ್ ಮನೆಯನ್ನು ತಲಪುವಿರಿ. ಇದು ಪೆರೇಡ್ ಮೈದಾನದ ಹತ್ತಿರವಿರುವ ಸಣ್ಣ ಗುಡ್ಡದ ಮೇಲಿದ್ದು ಪೋರ್ಚುಗೀಸರ ರಾಜ್ಯಪಾಲನ ನಿವಾಸವಾಗಿತ್ತು. ಮನೆಯ ಮುಂಭಾಗವು ದೊಡ್ಡ ಗಾಥಿಕ್ ಕಮಾನುಗಳನ್ನು ಹೊಂದಿದ್ದು, ಇದನ್ನು ಭಾರತವಲ್ಲದೇ ಬರ್ಮ, ಮಲಯ ಮತ್ತು ಸಿಲೋನುಗಳವರೆಗೂ ಅಧಿಕಾರವ್ಯಾಪ್ತಿಯಿದ್ದ ಕೊಚ್ಚಿನ್ನಿನ ಡಯೊಸಿಸ್‌ನ 27 ನೆಯ ಬಿಷಪ್ ಡಾಮ್ ಗೋಮ್ಸ್ ಫೆರೇರನಿಂದ ಸ್ವಾಧೀನಪಡಿಸಿಕೊಳ್ಳಲ್ಪಟ್ಟಿತು.
ಹೌದು, ಇದು ನಡಿಗೆಯನ್ನು ಮುಕ್ತಾಯಗೊಳಿಸುವ ಸಮಯವಾಗಿದೆ. ನಿಮ್ಮ ಮನಸ್ಸಿನಲ್ಲಿ ಈ ಹಿಂದೆ ಕಳೆದ ದಿನಗಳ ನೆನಪುಗಳು, ನಿಮ್ಮ ಕಣ್ಣುಗಳಲ್ಲಿ ಉಳಿದಿರುವ ಅತ್ಯಂತ ಸುಂದರ ದೃಷ್ಯಗಳ ನೆನಪು ಮತ್ತು ನಿಮ್ಮ ನಾಲಿಗೆಯು ಸವಿದ ರುಚಿಕರವಾದ ಅಡಿಗೆಯ ನೆನಪು ಮತ್ತೆ ಮತ್ತೆ ಮರುಕಳಿಸುತ್ತದೆ, ನಿಮ್ಮ ದಯವು ಈ ನಡಿಗೆಯನ್ನು ಮತ್ತೊಮ್ಮೆ ಸಾಗಲು ಇಷ್ಟಪಟ್ಟರೆ ಇದರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.
ಕೊಚ್ಚಿ ಬಗ್ಗೆ ಹೆಚ್ಚಿನದನ್ನು ಓದಿರಿ
ಹತ್ತಿರದ ರೈಲ್ವೇ ನಿಲ್ದಾಣ: ಎರ್ನಾಕುಲಮ್ ಮುಖ್ಯ ಬೋಟ್ ಜೆಟ್ಟಿಯಿಂದ 1½ ಕಿ.ಮೀ. ದೂರದಲ್ಲಿದೆ ಹತ್ತಿರದ ಏರ್‌ಪೋರ್ಟ್: ಕೊಚ್ಚಿನ್ ಅಂತರಾಷ್ಟ್ರೀಯ ಏರ್‌ಪೋರ್ಟ್, ಎರ್ನಾಕುಲಮ್‌ನಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ
ಸ್ಥಳಅಕ್ಷಾಂಶ: 9.964793, ರೇಖಾಂಶ: 76.242943
ಮ್ಯಾಪ್ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.