ಎರುಮೇಲಿ ಪಥ

ಕರಿಮಲೆ ಬೆಟ್ಟವನ್ನು ಹತ್ತಲು ಮತ್ತು ದಟ್ಟವಾದ ಕಾಡಿನಲ್ಲಿ ಚಾರಣ ಮಾಡಿ ಸನ್ನಿಧಾನವನ್ನು ತಲುಪಲು ಎರುಮೇಲಿ ಮಾರ್ಗದಲ್ಲಿ ತೆರಳುವುದು ಎಲ್ಲ ಅಯ್ಯಪ್ಪ ಭಕ್ತರ ಜೀವನದಲ್ಲಿ ಅತ್ಯಂತ ಮರೆಯಲಾಗದ ಅನುಭವ ನೀಡುತ್ತದೆ. ಎರಡು ದಿನಗಳವರೆಗೆ ಕಾಡಿನಲ್ಲಿ ನಡೆಯುವ ಮೂಲಕದ ಚಾರಣವು ಆಧ್ಯಾತ್ಮಿಕ ಭಾವವನ್ನು ಹುಟ್ಟುಹಾಕುವ ಶಕ್ತಿಯನ್ನು ಹೊಂದಿದೆ. ಏಕೆಂದರೆ, ಬರಿಗಾಲಿನಲ್ಲಿ ಸುಮಾರು 50 ಕಿಮೀ ಉದ್ದದ ಮಣ್ಣಿನ ಹಾದಿಗಳಲ್ಲಿ ಕಲ್ಲುಗಳು ಮತ್ತು ಮುಳ್ಳುಗಳ ಮೇಲೆ ನಡೆಯಬೇಕಿರುತ್ತದೆ.

ಪೇರೂರ್ ಕಾಲುವೆ

ಪೇರೂರ್ ಕಾಲುವೆಯು ಭಕ್ತರು ಎರುಮೇಲಿಯಿಂದ ಸನ್ನಿಧಾನಕ್ಕೆ ಕಾಡಿನ ಹಾದಿಯಲ್ಲಿ ನಡೆಯುವಾಗ ಸಿಗುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಅದರಾಚೆಗೆ ಪವಿತ್ರ ಸಮತಟ್ಟಾದ ಪ್ರದೇಶದಲ್ಲಿ ಪೂಂಕಾವನಂ ಪವಿತ್ರ ಕಾಡು ಇದೆ.

ಇರುಂಬೂನ್ನಿಕ್ಕರ

ಈ ಸ್ಥಳವು ಪೇರೂರ್ ಕಾಲುವೆ ಮತ್ತು ಸನ್ನಿಧಾನದ ನಡುವೆ ಇದೆ. ಭಗವಾನ್ ಅಯ್ಯಪ್ಪ ಮತ್ತು ಅವರ ಸೈನ್ಯವು ಈ ಪ್ರದೇಶದಲ್ಲಿ ತಮ್ಮ ಆಯುಧಗಳನ್ನು ಅಡಗಿಸಿದ್ದರು ಎಂದು ನಂಬಲಾಗಿದೆ. ಶಿವ, ಮುರುಗ ಮತ್ತು ಬಲರಾಮ ದೇವರುಗಳಿಗೆ ಸಮರ್ಪಿತವಾದ ದೇವಾಲಯಗಳು ಕಾಡಿನ ಒಳಗೆ ಇವೆ. ಇರುಂಬೂನ್ನಿಕ್ಕರವನ್ನು ದಾಟಿ ಮುಂದುವರಿಯಲು ಭಕ್ತರಿಗೆ ಅರಣ್ಯ ಇಲಾಖೆ ನೀಡುವ ಪಾಸ್‌ಗಳು ಬೇಕು.

ಅರಶುಮುಡಿಕೋಟ್ಟ

ಈ ಸ್ಥಳದಲ್ಲಿ ಅಯ್ಯಪ್ಪ ಮತ್ತು ಮುರುಗ ದೇವರುಗಳ ಸಣ್ಣ ದೇವಾಲಯಗಳಿವೆ.

ಕಾಳಕೆಟ್ಟಿ

ಈ ಸ್ಥಳವು ಪೇರೂರ್ ಕಾಲುವೆಯಿಂದ ಆರು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಶಿವ, ಪಾರ್ವತಿ ಮತ್ತು ಗಣಪತಿ ದೇವರ ದೇವಾಲಯಗಳಿವೆ.

ಅಳುತನದಿ

ಅಳುತನದಿಯು ಕಾಳಕೆಟ್ಟಿಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಸಮತಟ್ಟಾದ ಭೂಪ್ರದೇಶವಾಗಿದೆ. ಅಳುತವು ಪಂಬಾ ನದಿಯ ಉಪನದಿಯಾಗಿದೆ. ಭಕ್ತರು ಅಳುತದಲ್ಲಿ ಸ್ನಾನ ಮಾಡಿ, ನದಿ ತಳದಿಂದ ಒಂದು ಕಲ್ಲನ್ನು ತೆಗೆದುಕೊಂಡು, ಕಲ್ಲಿಡಾಮ್‌ಕುನ್ನು ("ಕಲ್ಲುಗಳನ್ನು ಎಸೆಯುವ ಬೆಟ್ಟ") ಏರಲು ಮುಂದುವರಿಯುತ್ತಾರೆ. ಅಳುತದ ಆಚೆಗೆ, ಪ್ರಾಣಿಗಳಿರುವ ಕಾಡು ಪ್ರದೇಶವಿದೆ. ಆ ಕಾರಣಕ್ಕಾಗಿ, ಸೂರ್ಯಾಸ್ತದ ನಂತರ ಯಾತ್ರಿಕರು ನದಿ ದಾಟಲು ಅನುಮತಿಸಲಾಗುವುದಿಲ್ಲ.

ಕಲ್ಲಿಡಾಮ್‌ಕುನ್ನು

ಅಳುತದಿಂದ ಕೆಂಪು ಜೇಡಿಮಣ್ಣಿನ ಹಾದಿ ಕಾಣಸಿಗುತ್ತದೆ. ಎರಡು ಕಿಲೋಮೀಟರ್ ಏರಿದ ನಂತರ, ಭಕ್ತರು ಅಳುತದಿಂದ ತೆಗೆದುಕೊಂಡ ಕಲ್ಲುಗಳನ್ನು ಬಿಡುವ ಸ್ಥಳವನ್ನು ತಲುಪುತ್ತಾರೆ.

ಇಂಚಿಪ್ಪಾರಕೋಟ್ಟ

ಇದು ಕೂಡ ಒಂದು ಗುಡ್ಡ ಪ್ರದೇಶವಾಗಿದೆ. ಇಲ್ಲಿ ಶಾಸ್ತ ದೇವಾಲಯವಿದೆ, ಮತ್ತು ದೇವತೆಯನ್ನು ಕೋಟ್ಟಯಿಲ್ ಶಾಸ್ತ ಎಂದು ಕರೆಯಲಾಗುತ್ತದೆ.

ಮುಕ್ಕುಳಿ

ಭಕ್ತರು ಅಳುತ ನದಿಯನ್ನು ದಾಟಿದ ನಂತರದ ಪ್ರಮುಖ ವಿಶ್ರಾಂತಿ ಸ್ಥಳ ಮುಕ್ಕುಳಿ ಆಗಿದೆ. ಇಂಚಿಪ್ಪಾರದಿಂದ ಮುಕ್ಕುಳಿಗೆ ಬೆಟ್ಟದ ಕೆಳಗೆ ಮತ್ತು ಕಾಡಿನ ದಾರಿಯಲ್ಲಿ ನಡೆದು ಹೋಗಬೇಕಾಗುತ್ತದೆ. ಭಗವಾನ್ ಅಯ್ಯಪ್ಪ ಮತ್ತು ಅವರ ಬೆಂಬಲಿಗರು ಇಲ್ಲಿ ವಿಶ್ರಾಂತಿ ಪಡೆದರು ಎಂದು ನಂಬಲಾಗಿದೆ. ತಮ್ಮ ಚಾರಣದ ನಂತರ ಇಲ್ಲಿ ವಿಶ್ರಾಂತಿ ಪಡೆಯುವ ಭಕ್ತರು ಅಗತ್ಯವಿದ್ದಲ್ಲಿ ಇಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಬಹುದು. ಈ ಸ್ಥಳದಲ್ಲಿ ಎರಡು ದೇವಾಲಯಗಳಿವೆ, ಒಂದು ಶಾಸ್ತ ಮತ್ತು ಇನ್ನೊಂದು ಭಗವತಿ ದೇವಸ್ಥಾನವಾಗಿದೆ.

ಕರಿಮಲೆ

ಮುಕ್ಕುಳಿಯಿಂದ ಚಾರಣವು ಪುತುಶೇರಿತೋಡು ಮೂಲಕ ಮತ್ತು ಕರಿಯಿಲಾಂ ಕಾಲುವೆಯ ಉದ್ದಕ್ಕೂ ಸಾಗುತ್ತದೆ ಮತ್ತು ಇದು ಇಳಿಜಾರಿನ ಹಾದಿಯಾಗಿದೆ. ಮೂರು ಕಿಲೋಮೀಟರ್ ನಡೆದು ಕರಿಮಲೆಯ ತಪ್ಪಲಿನಲ್ಲಿ ಮುಗಿಯುತ್ತದೆ. ಇಲ್ಲಿ ಭಕ್ತರು ಗಣಪತಿಗೆ ಒಣ ಎಲೆಗಳನ್ನು ಅರ್ಪಿಸುತ್ತಾರೆ. ಕರಿಮಲೆಯನ್ನು ಹತ್ತುವುದು ಶಬರಿಮಲೆ ತೀರ್ಥಯಾತ್ರೆಯ ಅತ್ಯಂತ ಕಠಿಣ ಭಾಗವಾಗಿದೆ. ಏರಿಕೆಯು ಕಡಿದಾದದ್ದು ಮತ್ತು ಏಳು ಹಂತಗಳಲ್ಲಿ ಮಾತ್ರ ಏರಬಹುದು.

ವಲಿಯಾನವಟ್ಟಮ್, ಚೆರಿಯಾನವಟ್ಟಮ್

ಕರಿಮಲೆಯಿಂದ ಇಳಿದ ನಂತರ, ಪಂಬಾ ನದಿಯ ಸಮೀಪದಲ್ಲಿರುವ ವಲಿಯಾನವಟ್ಟಮ್ ತಲುಪುತ್ತಾರೆ. ಇಲ್ಲಿ ಉತ್ತಮ ಸೌಲಭ್ಯಗಳಿವೆ. ಭಕ್ತರು ಮತ್ತೆ ಚಾರಣ ಮಾಡುವ ಮೊದಲು ತಮ್ಮ ಕೈಕಾಲುಗಳಿಗೆ ವಿಶ್ರಾಂತಿ ಕೊಟ್ಟುಕೊಳ್ಳಬಹುದು. ಅವರ ಮುಂದಿನ ಗಮ್ಯಸ್ಥಾನ ಪಂಬಾ ದಡದಲ್ಲಿರುವ ಚೆರಿಯಾನವಟ್ಟಮ್ ಆಗಿರುತ್ತದೆ. ಮುಂದೆ ಇರುವುದು ನೀಲಿಮಲೆ ಬೆಟ್ಟವಾಗಿದೆ.

ನ್ಯೂಸ್ ಲೆಟರನ್ನು ಸಬ್ಸ್ಕ್ರೈಬ್ ಮಾಡಿ

Icon for Go To Top