English
தமிழ்
हिन्दी
తెలుగు
ಕನ್ನಡ
ಶಬರಿಮಲೆಯಲ್ಲಿ ಮುಖ್ಯ ತೀರ್ಥಯಾತ್ರೆಯ ಕಾಲವು ನವೆಂಬರ್ನಿಂದ ಜನವರಿಯವರೆಗೆ ಇರುತ್ತದೆ.
ಶಬರಿಮಲೆ ತೀರ್ಥಯಾತ್ರೆ
ಶಬರಿಮಲೆ ಶ್ರೀ ಧರ್ಮ ಶಾಸ್ತ ದೇವಸ್ಥಾನವು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಅತ್ಯಂತ ಜನನಿಬಿಡ ಯಾತ್ರೆ ನಡೆಯುವ ಅರಣ್ಯ ದೇವಾಲಯಗಳಲ್ಲಿ ಒಂದಾಗಿದೆ. ಒಂದು ಸಮಯದಲ್ಲಿ, ಇದು ವಿಶ್ವದ ಅತಿ ಹೆಚ್ಚು ಭಕ್ತರನ್ನು ಆಕರ್ಷಿಸಿದ ದೇವಾಲಯವೆಂದು ಪರಿಗಣಿಸಲ್ಪಟ್ಟಿತ್ತು. ಈ ಬೆಟ್ಟದ ಮೇಲಿನ ದೇಗುಲವು ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಪೆರಿಯಾರ್ ಹುಲಿ ಸಂರಕ್ಷಿತ ಅರಣ್ಯದೊಳಗೆ ನೆಲೆಗೊಂಡಿದೆ. ಅನಧಿಕೃತ ದಾಖಲೆಗಳ ಪ್ರಕಾರ, ಪ್ರತಿ ವರ್ಷ ಮೂರರಿಂದ ಐದು ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶ್ರೀ ಧರ್ಮಶಾಸ್ತ ಎಂದೂ ಕರೆಯಲ್ಪಡುವ ಭಗವಾನ್ ಅಯ್ಯಪ್ಪ ದೇವಾಲಯದ ಪ್ರಧಾನ ದೇವರು. ಶಬರಿಮಲೆಯಲ್ಲಿ ಅಯ್ಯಪ್ಪನ ಆತ್ಮವು ಧರ್ಮಶಾಸ್ತದೊಂದಿಗೆ ಐಕ್ಯವಾಯಿತು ಎಂದು ಭಕ್ತರು ನಂಬುತ್ತಾರೆ.
ಶಬರಿಮಲೆ ತೀರ್ಥಯಾತ್ರೆಗೆ ಸಂಬಂಧಿಸಿದ ಆಚರಣೆಗಳು ಮತ್ತು ಸಂಪ್ರದಾಯಗಳಿಂದಾಗಿ ಭಾರತದ ಉಳಿದ ದೇವಾಲಯಗಳಿಗಿಂತ ಈ ದೇವಾಲಯವು ವಿಭಿನ್ನವಾಗಿದೆ. ದೇವಾಲಯವು ವರ್ಷವಿಡೀ ತೀರ್ಥಯಾತ್ರೆಗಳಿಗೆ ಅಥವಾ ಪೂಜೆಗಳಿಗೆ ತೆರೆದಿರುವುದಿಲ್ಲ. ಮಲಯಾಳಂ ಕ್ಯಾಲೆಂಡರ್ ಪ್ರಕಾರ ದೇವಾಲಯ ತೆರೆಯುವ ಮತ್ತು ಮುಚ್ಚುವ ದಿನಾಂಕಗಳನ್ನು ನಿರ್ಧರಿಸಲಾಗುತ್ತದೆ. ದೇವಾಲಯದ ಪ್ರಮುಖ ತೀರ್ಥಯಾತ್ರೆ ಕಾಲವೆಂದರೆ ಮಂಡಲಪೂಜೆ ಮತ್ತು ಮಕರವಿಳಕ್ಕು.
ಶಬರಿಮಲೆಯಲ್ಲಿ ಅತ್ಯಂತ ಪ್ರಮುಖವಾದ ತೀರ್ಥಯಾತ್ರೆಯ ಕಾಲವು ಮಲಯಾಳಂ ತಿಂಗಳ ವೃಶ್ಚಿಕಂ [ನವೆಂಬರ್-ಡಿಸೆಂಬರ್] ಮೊದಲ ದಿನದಂದು ಪ್ರಾರಂಭವಾಗುತ್ತದೆ ಮತ್ತು ಮಲಯಾಳಂ ತಿಂಗಳ ಧನು [ಡಿಸೆಂಬರ್-ಜನವರಿ] ಹನ್ನೊಂದನೇ ದಿನದವರೆಗೆ ನಡೆಯುತ್ತದೆ. 41 ದಿನಗಳ ಅವಧಿಯ ಈ ವಾರ್ಷಿಕ ತೀರ್ಥಯಾತ್ರೆಯನ್ನು ಶಬರಿಮಲೆಯಲ್ಲಿ ಮಂಡಲ ಕಾಲಂ ಎಂದು ಕರೆಯಲಾಗುತ್ತದೆ. ಮಂಡಲಪೂಜೆಯ ಸಮಯದಲ್ಲಿ ಶಬರಿಮಲೆಗೆ ಅಪಾರ ಪ್ರಮಾಣದಲ್ಲಿ ಭಕ್ತರು ಅಗಮಿಸುತ್ತಾರೆ.
ಶಬರಿಮಲೆಗೆ ಭೇಟಿ ನೀಡಲು ಬಯಸುವ ಪ್ರತಿಯೊಬ್ಬ ಭಕ್ತನು ಹಲವಾರು ಕಟ್ಟುನಿಟ್ಟಾದ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸಬೇಕಾಗುತ್ತದೆ. ಅವರು ಕಠಿಣ ವ್ರತಾಚರಣೆಯನ್ನು (ಅಯ್ಯಪ್ಪ ವ್ರತ) ಕೈಗೊಳ್ಳಬೇಕು ಮತ್ತು 41 ದಿನಗಳ ಕಾಲ ಬ್ರಹ್ಮಚರ್ಯವನ್ನು ಆಚರಿಸಬೇಕು ಮತ್ತು ದೇವಾಲಯಕ್ಕೆ ಹೋಗುವ ಮೊದಲು ಪವಿತ್ರ ಮಾಲೆಯನ್ನು ಧರಿಸಿಕೊಂಡು, ತಮ್ಮ ಪಾಪಗಳನ್ನು ಶುದ್ಧೀಕರಿಸಿಕೊಳ್ಳಬೇಕು. ಭಕ್ತರು ಕಠಿಣವಾದ, ಅಪಾಯಕಾರಿ ಹಾದಿದಾರಿಯಲ್ಲಿ ಸಾಗಿ, ಕರಿಮಲೆಯನ್ನು ದಾಟಿ ಪಂಬ ತಲುಪಬೇಕು. ಶಬರಿಮಲೆಯಲ್ಲಿ ಅಯ್ಯಪ್ಪನ ಸನ್ನಿಧಿಯಲ್ಲಿ ಸಾಂತ್ವನ ಪಡೆಯಲು ನೀಲಿಮಲೆಯನ್ನು ದಾಟುವ ಮೊದಲು ಪಂಬಾ ನದಿಯ ಪವಿತ್ರ ನೀರಿನಲ್ಲಿ ಸ್ನಾನ ಮಾಡಬೇಕು. ಸಾಂಪ್ರದಾಯಿಕ ಇರುಮುಡಿ ಕೆಟ್ಟು (ಕಾಣಿಕೆಗಳ ಪವಿತ್ರ ಎರಡು ಭಾಗಗಳ ಕಟ್ಟು) ಹೊಂದಿರುವ ಶಬರಿಮಲೆಯನ್ನು ತಲುಪುವ ಭಕ್ತರಿಗೆ ಮಾತ್ರ 18 ಪವಿತ್ರ ಮೆಟ್ಟಿಲುಗಳನ್ನು ಹತ್ತಲು ಮತ್ತು ಪ್ರಧಾನ ದೇವತೆಯ ದರ್ಶನವನ್ನು ಪಡೆಯಲು ಮತ್ತು ಪ್ರಾರ್ಥಿಸಲು ಅನುಮತಿಸಲಾಗಿದೆ. ಕಠಿಣವಾದ ಆಚರಣೆಗಳು ಮತ್ತು ಸಂಪ್ರದಾಯಗಳು, 41 ದಿನಗಳ ವೇಷಭೂಷಣ, ಆಹಾರ ಮುಂತಾದವುಗಳಿಗೆ ಸಂಬಂಧಿಸಿದಂತೆ ನಿರ್ಬಂಧಗಳು ಶಬರಿಮಲೆಯಲ್ಲಿನ ಯಾತ್ರಾರ್ಥಿಗಳನ್ನು ಭಾರತದ ಇತರ ದೇವಾಲಯಗಳಿಗೆ ತೀರ್ಥಯಾತ್ರೆಗೆ ಹೊರಡುವವರಿಗಿಂತ ಭಿನ್ನವಾಗಿ ನಿಲ್ಲುವಂತೆ ಮಾಡುತ್ತದೆ.
ಶಬರಿಮಲೆಯಲ್ಲಿನ ಮಂಡಲ ಕಾಲಂ ಮುಗಿದ ನಂತರ ಮುಂದಿನ ಪ್ರಮುಖ ತೀರ್ಥಯಾತ್ರೆಯ ಸಮಯವೆಂದರೆ ಮಕರವಿಳಕ್ಕು ಉತ್ಸವ. ಇದು ದೇವಸ್ಥಾನದ ಉತ್ಸವದ ಸಂಪ್ರದಾಯಕ್ಕೇ ಹೊಸ ಕಲಶವಿಟ್ಟಂತೆ. ಮಕರವಿಳಕ್ಕು ವಾರ್ಷಿಕವಾಗಿ ಮಕರಸಂಕ್ರಾಂತಿಯ ದಿನದಂದು (ಜನವರಿ ಮಧ್ಯದಲ್ಲಿ) ನಡೆಯುತ್ತದೆ. ಇದು ತೀರ್ಥಯಾತ್ರಾ ಕಾಲದ ಪರಾಕಾಷ್ಠೆಯನ್ನು ಸೂಚಿಸುತ್ತದೆ. ಶಬರಿಮಲೆಯ ಸಮೀಪವಿರುವ ಪೊನ್ನಂಬಲಮೇಡು ಎಂಬ ಬೆಟ್ಟದಲ್ಲಿ ಮಕರಜ್ಯೋತಿ ಅಥವಾ ಮಕರವಿಳಕ್ಕು ದೀಪ ಬೆಳಗುವುದು ಇದರ ಮುಖ್ಯ ಆಚರಣೆಯಾಗಿದೆ. ಮಕರಜ್ಯೋತಿಗೆ ಸಾಕ್ಷಿಯಾಗುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಘಟನೆಯನ್ನು ಸನ್ನಿಧಾನಂ, ಪಾಂಡಿತಾವಳಂ, ಶರಮ್‌ಕುತ್ತಿ, ಮರಕೂಟಂ, ಪುಲ್ಲುಮೇಡು, ಹಿಲ್ ಟೊಪ್, ನೀಲಿಮಲೆ, ಚಾಲಕ್ಕಯಂ ಮತ್ತು ಅಟ್ಟತೋಡುಗಳಿಂದ ವೀಕ್ಷಿಸಬಹುದು. ಮಕರವಿಳಕ್ಕುಗೆ ಸಂಬಂಧಿಸಿದ ಮತ್ತೊಂದು ಆಕರ್ಷಕ ಘಟನೆಯೆಂದರೆ ತಿರುವಾಭರಣಂ ಮೆರವಣಿಗೆ. ಭಗವಾನ್ ಅಯ್ಯಪ್ಪನ ಪವಿತ್ರ ಆಭರಣಗಳ ಈ ವಿಧ್ಯುಕ್ತ ಮೆರವಣಿಗೆಯು ಪ್ರತಿ ವರ್ಷ ಮಕರವಿಳಕ್ಕು ಉತ್ಸವದ ಮೂರು ದಿನಗಳ ಮೊದಲು ಪಂದಳಂನ ವಲಿಯಕೋಯಿಕ್ಕಲ್ ದೇವಸ್ಥಾನದಿಂದ ಪ್ರಾರಂಭವಾಗಿ ಮಕರವಿಳಕ್ಕು ದಿನದಂದು ಸನ್ನಿಧಾನವನ್ನು ತಲುಪುತ್ತದೆ. ಒಮ್ಮೆ ಈ ಉತ್ಸವವು ಮುಕ್ತಾಯಗೊಂಡ ನಂತರ, ಈ ದೇವಾಲಯದ ವರ್ಷದ ಪ್ರಮುಖ ಕಾರ್ಯಕ್ರಮಗಳು ಕೊನೆಗೊಳ್ಳುತ್ತದೆ.
ಈ ಎರಡು ಘಟನೆಗಳ ಹೊರತಾಗಿ, ದೇವಸ್ಥಾನವು ಪ್ರತಿ ಮಲಯಾಳಂ ತಿಂಗಳ ಮೊದಲ ಐದು ದಿನಗಳವರೆಗೆ ಮತ್ತು ವಿಷು ಮತ್ತು ಓಣಂನಂತಹ ಇತರ ಮಂಗಳಕರ ಸಂದರ್ಭಗಳಲ್ಲಿ ತೆರೆಯುತ್ತದೆ. ಈ ದಿನಗಳಲ್ಲಿ ಪ್ರತಿ ದಿನ ಬೆಳಗ್ಗೆ 3.00 ಗಂಟೆಗೆ ಧಾರ್ಮಿಕ ವಿಧಿವಿಧಾನಗಳಿಗಾಗಿ ಗರ್ಭಗುಡಿ ತೆರೆದು, ಹರಿವರಾಸನಂ ನುಡಿಸಿದ ನಂತರ ರಾತ್ರಿ 11.00 ಗಂಟೆಗೆ ಮುಚ್ಚಲಾಗುತ್ತದೆ.
ಹರಿವರಾಸನಂ
ಪ್ರತಿದಿನ ರಾತ್ರಿ, ಶಬರಿಮಲೆ ದೇವಾಲಯದಲ್ಲಿ, ಗರ್ಭಗುಡಿಯನ್ನು ಮುಚ್ಚುವ ಮುನ್ನ, ಭಗವಾನ್ ಅಯ್ಯಪ್ಪನಿಗೆ ಲಾಲಿ ಹಾಡಿನಂತೆ ಒಂದು ದೈವಿಕ ಹಾಡನ್ನು ನುಡಿಸಲಾಗುತ್ತದೆ. ಈ ಹಾಡು ವಿಶ್ವವಿಖ್ಯಾತ “ಹರಿವರಾಸನಂ”. ಹಾಡು ನಿಧಾನವಾಗಿ ಮುಕ್ತಾಯಗೊಳ್ಳುತ್ತಿದ್ದ ಹಾಗೆಯೇ, ಕಿರಿಯ ಅರ್ಚಕರು ಒಬ್ಬರ ನಂತರ ಒಬ್ಬರು ಗರ್ಭಗುಡಿಯಿಂದ ಹೊರಗೆ ಬರುತ್ತಾರೆ. ಇವರ ಜೊತೆಗೆ ಮುಖ್ಯ ಅರ್ಚಕರು ಅಥವಾ ಮೇಲ್ಶಾಂತಿಯವರು ಶ್ರೀಕೋವಿಲ್‌ನಲ್ಲಿರುವ ಪವಿತ್ರ ದೀಪಗಳನ್ನು ನಿಧಾನವಾಗಿ ನಂದಿಸಿ ದೇವಾಲಯವನ್ನು ಮುಚ್ಚುತ್ತಾರೆ. ಈ ಆಚರಣೆಯನ್ನು ಶಬರಿಮಲೆ ದೇವಾಲಯದಲ್ಲಿ ಮಾತ್ರ ಕಾಣಬಹುದು.
ಹರಿವರಾಸನಂ ಕೀರ್ತನೆಯು ಭಗವಾನ್ ಅಯ್ಯಪ್ಪನಿಗೆ (ಧರ್ಮಶಾಸ್ತ ಎಂದೂ ಕರೆಯುತ್ತಾರೆ) ಒಂದು ಸ್ತುತಿಯಾಗಿದ್ದು, ಅವನ ಮಹಿಮೆಯನ್ನು ಸಾರುತ್ತದೆ ಮತ್ತು ಅವನನ್ನು ತಲೆಯಿಂದ ಪಾದದವರೆಗೆ ವಿವರಿಸುತ್ತದೆ. ಹರಿವರಾಸನಂ ಕೀರ್ತನವು 16 ಚರಣಗಳನ್ನು ಹೊಂದಿದೆ. ಇವುಗಳಲ್ಲಿ ಎಂಟು ಚರಣಗಳನ್ನು ಪ್ರತಿ ರಾತ್ರಿ ಶಬರಿಮಲೆಯಲ್ಲಿ ಹಾಡಲಾಗುತ್ತದೆ.